Monday, April 4, 2011

Viswa Katha Kosha of Navakarnataka Publications - Press Reports on 4 April 2011







ವಿಶ್ವಕಥಾಕೋಶ ಮರುಮುದ್ರಿತ ಸಂಪುಟ ಬಿಡುಗಡೆ



ನವಕರ್ನಾಟಕ ಪ್ರಕಾಶನವು ಪ್ರಕಟಿಸಿದ ವಿಶ್ವಕಥಾಕೋಶ ಮಾಲಿಕೆಯ 25 ಮರುಮುದ್ರಿತ ಸಂಪುಟಗಳನ್ನು ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಬೆಂಗಳೂರಿನಲ್ಲಿ ಭಾನುವಾರ ಬಿಡುಗಡೆಗೊಳಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ರಾಜಾರಾಮ್, ಅನುವಾದಕ ಸಿ.ಕೃಷ್ಣರಾವ್, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ, ಪ್ರಾಧ್ಯಾಪಕಿ ಡಾ.ಎಚ್.ನಾಗವೇಣಿ ಚಿತ್ರದಲ್ಲಿದ್ದಾರೆ.ಪ್ರಜಾವಾಣಿ ಚಿತ್ರ,

ಬೆಂಗಳೂರು: ಮೂವತ್ತು ವರ್ಷಗಳ ಹಿಂದೆ ಪ್ರಕಟವಾಗಿದ್ದ ವಿಶ್ವಕಥಾಕೋಶ ಮಾಲಿಕೆಯ 25 ಮರುಮುದ್ರಿತ ಸಂಪುಟಗಳನ್ನು ಭಾನುವಾರ ಇಲ್ಲಿಯ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು. ನವಕರ್ನಾಟಕ ಪ್ರಕಾಶನ ಸಂಸ್ಥೆಯು ನಿರಂಜನರ (ಕುಳಕುಂದ ಶಿವರಾಯ) ಪ್ರಧಾನ ಸಂಪಾದಕತ್ವದಲ್ಲಿ ಹೊರತಂದಿದ್ದ ಈ ಕೃತಿಗಳನ್ನು ಹಿರಿಯ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಅವರು ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ‘ವಿಶ್ವದ ಶ್ರೇಷ್ಠ ಲೇಖಕರ ಕಥೆಗಳನ್ನೊಳಗೊಂಡ ಈ ಸಂಪುಟಗಳು ಇತರ ಧರ್ಮ, ವಿಚಾರಗಳನ್ನು ಪರಿಚಯಿಸಿರುವುದು ಶ್ಲಾಘನೀಯ’ ಎಂದರು.
ಈ ಸಂಪುಟಗಳ ಪ್ರಕಟಣೆಗೆ ಧನ ಸಹಾಯ ಮಾಡಿರುವ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಮಾತನಾಡಿ, ‘ಒಬ್ಬ ಕನ್ನಡತಿಯಾಗಿ, ಸಾಹಿತ್ಯ ಪ್ರೇಮಿಯಾಗಿ ಈ ಪುಸ್ತಕಗಳ ಪ್ರಕಟಣೆಗೆ ಹಣ ನೀಡಿದ್ದೇನೆ. ಕೃತಿಗಳ ಪ್ರಕಟಣೆಗೆ ಯಾರು ಬೇಕಾದರೂ ಹಣ ನೀಡುತ್ತಾರೆ. ಆದರೆ 30 ವರ್ಷಗಳಷ್ಟು ಹಳೆಯದಾದ ವಿಶ್ವಕೋಶದ ಸಂಪುಟಗಳನ್ನು ಮರುಮುದ್ರಣ ಮಾಡಿರುವುದು ಸವಾಲಿನ ಕೆಲಸ’ ಎಂದರು.

‘ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳದಿದ್ದರೆ ಕನ್ನಡ ಲೇಖಕರು ಬದುಕುವುದಾದರೂ ಹೇಗೆ? ಪ್ರತಿಯೊಬ್ಬರೂ ತಮ್ಮ ಮನೆಯ ತಿಂಗಳ ಬಜೆಟ್‌ನಲ್ಲಿ ಸ್ವಲ್ಪ ಭಾಗವನ್ನು ಪುಸ್ತಕಗಳ ಖರೀದಿಗೆಂದೇ ತೆಗೆದಿರಿಸಬೇಕು’ ಎಂದು ಮನವಿ ಮಾಡಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ರಾಜಾರಾಮ್ ಮಾತನಾಡಿ, ‘ಇಂಟರ್ನೆಟ್, ಸರ್ಚ್ ಎಂಜಿನ್ ಇಲ್ಲದ ಸಮಯದಲ್ಲಿ ನಿರಂಜನರು ವಿಶ್ವದ ವಿವಿಧ ಲೇಖಕರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ಸಂದರ್ಭದಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಭಾರತದಲ್ಲಿರುವ ವಿವಿಧ ದೇಶಗಳ ರಾಯಭಾರ ಕಚೇರಿಗಳಿಗೆ ಪತ್ರ ಬರೆದು ಆಯಾ ಲೇಖಕರ ಕೃತಿ, ವಿಳಾಸಗಳನ್ನು ಪಡೆಯಬೇಕಾಯಿತು. ಇದಕ್ಕಾಗಿಯೇ ಎರಡು ವರ್ಷಗಳು ಹಿಡಿದವು. ಆದರೆ ವಿದೇಶದಲ್ಲಿರುವ ಕೆಲ ಭಾರತೀಯ ರಾಯಭಾರಿಗಳು ಸ್ಪಂದಿಸಲಿಲ್ಲ’ ಎಂದು ವಿಷಾದಿಸಿದರು.

ಲಂಕಾ ದಹನವೇ?: ಇತ್ತೀಚೆಗೆ ನಡೆದ ವಿಶ್ವಕಪ್ ಕ್ರಿಕೆಟ್‌ಗೆ ಸಂಬಂಧಪಟ್ಟಂತೆ ಮಾಧ್ಯಮಗಳು ಅತಿ ರಂಜಿತ ವರದಿಗಳನ್ನು ಪ್ರಕಟಿಸಿದವು. ‘ಲಂಕಾ ದಹನ’, ‘ಪಾಕಿಗಳ ಗಡಿಪಾರು’ ಎಂಬಂಥ ತಲೆ ಬರಹಗಳನ್ನು ಪ್ರಕಟಿಸುವ ಮೂಲಕ ರಾಜಕೀಯವನ್ನು ಕ್ರೀಡೆಯೊಂದಿಗೆ ಥಳುಕು ಹಾಕಿದ್ದ ಸರಿಯಲ್ಲ ಎಂದು ಅವರು ಟೀಕಿಸಿದರು.

ಕೃತಿ ಪರಿಚಯಿಸಿದ ಲೇಖಕ ಎಸ್.ದಿವಾಕರ್, ‘ವಿಶ್ವದ ವಿವಿಧ ಭಾಷೆಗಳ ಶ್ರೇಷ್ಠ ಕೃತಿಗಳಿಗೆ ಸರಿಸಾಟಿಯಾಗಬಲ್ಲ ಕನ್ನಡದ ಹಲವಾರು ಕಥೆಗಳು ವಿಶ್ವಕಥಾಕೋಶದಲ್ಲಿವೆ’ ಎಂದರು.ಇತರ ಭಾಷೆಗಳ ಕೃತಿಗಳನ್ನು ವಿಶ್ವಕಥಾಕೋಶಕ್ಕಾಗಿ ಅನುವಾದಿಸಿದ ಸಿ.ಸೀತಾರಾಂ, ಸಿ.ಕೃಷ್ಣರಾವ್, ಕೃತಿಗಳ ಮುಖಪುಟಕ್ಕೆ ಚಿತ್ರಗಳನ್ನು ರಚಿಸಿದ ಕಲಾವಿದ ಕಮಲೇಶ್, ಪ್ರಾಧ್ಯಾಪಕಿ ಡಾ.ಎಚ್.ನಾಗವೇಣಿ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ವಿಶ್ವ ಭ್ರಾತೃತ್ವವನ್ನು ಬಿಂಬಿಸುವ ನೃತ್ಯ ಪ್ರದರ್ಶನವನ್ನು ವಿಶ್ರುತಾ ಕಲಾ ಶಾಲೆಯ ಕಲಾವಿದರು ವಿದ್ಯಾ ವೆಂಕಟರಾಮ್ ಅವರ ನೇತೃತ್ವದಲ್ಲಿ ಪ್ರಸ್ತುತಪಡಿಸಿದರು. ಗಾಯಕಿ ಸುಮತಿ ಯುದ್ಧ ವಿರೋಧಿ ಗೀತೆಗಳನ್ನು ಹಾಡಿದರು.

ವಿಶ್ವಕಥಾಕೋಶದ ಸಂಪುಟಗಳು

ಧರಣಿಮಂಡಲ ಮಧ್ಯದೊಳಗೆ (22 ಕನ್ನಡ ಕಥೆಗಳು), ಆಫ್ರಿಕದ ಹಾಡು (ಆಫ್ರಿಕಾ ಖಂಡ), ಕಾಡಿನಲ್ಲಿ ಬೆಳದಿಂಗಳು (ವಿಯೆಟ್ನಾಂ), ಚೆಲುವು (ಮಂಗೋಲಿಯಾ, ಚೀನಾ, ಜಪಾನ್), ಸುಭಾಷಿಣಿ (ಭಾರತ, ನೆರೆಹೊರೆಯ ದೇಶಗಳ 23 ಕಥೆಗಳು), ವಿಚಿತ್ರ ಕಕ್ಷಿದಾರ (ಇಂಗ್ಲೆಂಡ್), ಮಂಜುಹೂವಿನ ಮದುವಣಿಗ (ಹಂಗೆರಿ, ರೊಮಾನಿಯಾ), ಬೂದುಬಣ್ಣದ ಕಾಂಗರೂ (ಆಸ್ಟ್ರೇಲಿಯಾ ನ್ಯೂಜಿಲೆಂಡ್), ಹೆಜ್ಜೆಗುರುತು (ರಷ್ಯ-ನೆರೆಹೊರೆ ಕಥೆಗಳು), ಅರಬಿ (ಐರ್ಲೆಂಡ್, ವೇಲ್ಸ್, ಸ್ಕಾಟ್ಲೆಂಡ್), ನೆತ್ತರು ದೆವ್ವ (ಜೆಕೊಸ್ಲೊವಾಕಿಯಾ), ಬಾವಿಕಟ್ಟೆಯ ಬಳಿ (ಯುಗೋಸ್ಲಾವಿಯಾ, ಆಲ್ಬೇನಿಯಾ), ಅದೃಷ್ಟ (ಅಮೆರಿಕ, ಕೆನಡಾ, ಮೆಕ್ಸಿಕೊ), ಸಜ್ಜನನ ಸಾವು (ಐಸ್‌ಲೆಂಡ್, ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫಿನ್ಲೆಂಡ್), ಡೇಗೆ ಹಕ್ಕಿ (ಇಟಲಿ, ಆಸ್ಟ್ರಿಯಾ), ಅವಸಾನ (ಗ್ರೀಸ್, ಸೈಪ್ರಸ್, ಟರ್ಕಿ), ತಾತನ ಹುಟ್ಟುಹಬ್ಬ (ಹಾಲೆಂಡ್, ಬೆಲ್ಜಿಯಂ), ಬಾಲ ಮೇಧಾವಿ (ಜರ್ಮನಿ), ಇಬ್ಬರು ಗೆಳೆಯರು (ಸ್ಪೇನ್, ಪೋರ್ಚುಗಲ್), ಅಬಿಂದಾ-ಸಯಿದ್ (ಇಂಡೊನೇಷ್ಯ, ಫಿಲಿಪೈನ್ಸ್, ಮಲಯ, ಸಿಂಗಪುರ, ಥಾಯ್ಲೆಂಡ್), ನಿಗೂಢ ಸೌಧ (ಫ್ರಾನ್ಸ್), ಬೆಳಗಾಗುವ ಮುನ್ನ (ಕ್ಯೂಬಾ, ಜಮೈಕಾ), ಮರಳುಗಾಡಿನ ಮದುವೆ (ಪಶ್ಚಿಮ ಏಷ್ಯ), ಕಿವುಡು ವನದೇವತೆ (ದಕ್ಷಿಣ ಅಮೆರಿಕ), ಸಾವಿಲ್ಲದವರು (ಪಂಚ ಮಹಾಕಾವ್ಯಗಳಿಂದ ಆಯ್ದ ಕಥೆಗಳು).
ಬಿಡಿ ಪ್ರತಿ ಬೆಲೆ ರೂ 65. ಎಲ್ಲ ಸಂಪುಟಗಳ ಬೆಲೆ ರೂ 1625. ಪ್ರತಿಗಳು ನವಕರ್ನಾಟಕ ಪ್ರಕಾಶನದ ಎಲ್ಲ ಮಳಿಗೆಗಳಲ್ಲಿ ಲಭ್ಯ.


Viswa Katha Kosha of Navakarnataka Publications
Released on 3 April 2011
Thank You Press